ಟೈರೋಸಿನ್
ಪ್ರೋಟೀನುಗಳಲ್ಲಿ ಸಾಧಾರಣವಾಗಿ ಇರುವ ಒಂದು ಅಮೈನೋ ಆಮ್ಲ. ಅಣು ಸೂತ್ರ  ರಾಸಾಯನಿಕ ಸೂತ್ರ ಪ್ಯಾರಾಹೈಡ್ರಾಕ್ಸಿ ಫೀನೈಲ್ ಅಲಾನಿನ್. ಟೈರೋಸಿನ್ ನೀರಿನಲ್ಲಿ ಅಷ್ಟಾಗಿ ವಿಲೀನವಾಗುವುದಿಲ್ಲ. ಬಿಸಿನೀರಿನಲ್ಲಿ ವಿಲೀನತೆ ಹೆಚ್ಚು. 

ಚಿತ್ರ-1

ನೀರಿನ ಹಾಗೂ ಪ್ರತ್ಯಾಮ್ಲೀಯ ದ್ರಾವಣದಲ್ಲಿರುವ ಟೈರೋಸಿನ್ 278mm ನಲ್ಲಿ ಅತ್ಯಧಿಕ ಅವಶೋಷಣೆಯನ್ನು ಪ್ರದರ್ಶಿಸುತ್ತದೆ. ಈ ಗುಣದ ಲಾಭವನ್ನು ಪಡೆದು ಪ್ರೋಟೀನನ್ನು ಪರಿಮಾಣಾತ್ಮಕವಾಗಿ ಅಳೆಯುವ ವಿಧಾನವೊಂದನ್ನು ರೂಪಿಸಲಾಗಿದೆ.

ಟೈರೋಸಿನ್ನು ಮಾನವನ ದೇಹದಲ್ಲಿ ಫೀನೈಲ್ ಅಲಾನಿನ್ ಆಮ್ಲದಿಂದ ಉತ್ಪಾದಿತವಾಗುತ್ತದೆ. ಹೀಗಾಗಿ ಇದೊಂದು ಅತ್ಯಗತ್ಯ ಅಮೈನೋ ಆಮ್ಲವೇನೂ ಅಲ್ಲ. ಬ್ಯಾಕ್ಟೀರಿಯಗಳು ಎರಿಥ್ರೋಸ್ ಫಾಸ್ಫೇಟನ್ನು ಮೂಲ ವಸ್ತುವನ್ನಾಗಿ ಬಳಸಿ ಈ ಅಮೈನೋ ಆಮ್ಲವನ್ನು ಸಂಶ್ಲೇಷಿಸುತ್ತವೆ. ಮಾನವನ ದೇಹದಲ್ಲಿ ಟೈರೋಸಿನ್ ಅಲಾನಿನ್ನುಗಳ ಒಂದೇ ಮಾರ್ಗದಲ್ಲಿ ಜೀರ್ಣಗೊಂಡು ಮೆಲಾನಿನ್ ಎಂಬ ವರ್ಣವಸ್ತುಗಳನ್ನು ಕೊಡುತ್ತದೆ. ಚರ್ಮದ ಬಣ್ಣಕ್ಕೆ ಇವೇ ಕಾರಣ. ಈ ಕ್ರೀಯೆಗೆ ಟೈರೋಸಿನ್ ಆಕ್ಸಿಡೇಸ್ ಕಿಣ್ವ ಅಗತ್ಯ. ವರ್ಣಹೀನತೆ (ಆಲ್ಬಿನಿಸಮ್) ಎಂಬ ಅನುವಂಶಿಕ ರೋಗದಿಂದ ನರಳುವ ವ್ಯಕ್ತಿಯಲ್ಲಿ ಈ ಕಿಣ್ವವಿರುವುದಿಲ್ಲ.
(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ